BROUGHT TO YOU BY 'SOUPARNIKA AYURVEDALAYA' , BIRUR

BROUGHT TO YOU BY 'SOUPARNIKA AYURVEDALAYA' , Shimoga

Monday, January 2, 2012

ಆಯುರ್ಧಾರಾ-೨
 ಈ ಹಿಂದಿನ ಆಯುರ್ಧಾರೆಯಲ್ಲಿ, ಆಯುರ್ವೇದದ ಪರಿಭಾಷೆಯ ಬಗೆಗೆ ಹೀಗೆ ತಿಳಿಸಲಾಯಿತು :
“ಹಿತಾಹಿತಂ ಸುಖಂ ದುಃಖಮಾಯುಸ್ತಸ್ಯ ಹಿತಾಹಿತಂ|
ಮಾನಂ ಚ ತಚ್ಚ ಯತ್ರೋಕ್ತಂ ಆಯುರ್ವೇದಃ ಸ ಉಚ್ಯತೆ||”
ಚ.ಸಂ.ಸೂ. ೧/೪೧

ಹಿತಾಯು, ಅಹಿತಾಯು, ಸುಖಾಯು, ದುಃಖಾಯು ಎಂಬ ನಾಲ್ಕು ವಿಧದ ಆಯುಗಳ ಬಗ್ಗೆ, ಅವುಗಳ ಹಿತಾಹಿತಗಳ(ಪಥ್ಯಾಪಥ್ಯಗಳ) ಬಗ್ಗೆ ಹಾಗೂ ಆಯುವಿನ ಪ್ರಮಾಣದ ಬಗ್ಗೆಯೂ ಎಲ್ಲಿ ವರ್ಣಿಸಲಾಗಿದೆಯೋ, ಆ ಶಾಸ್ತ್ರಕ್ಕೆ ಆಯುರ್ವೇದ ಎಂದು ಹೆಸರು.


ಈಗ ಹಿತಾಯು ಮತ್ತು ಅಹಿತಾಯು, ಸುಖಾಯು ಮತ್ತು ದುಃಖಾಯು, ಆಯುವಿನ ಪ್ರಮಾಣ, ಇವುಗಳ ಬಗ್ಗೆ ಸೂಕ್ಷ್ಮವಾಗಿ ತಿಳಿಯೋಣ.

ಹಿತಾಯು:

“ಹಿತೈಷಿಣಃ ಪುನರ್ಭೂತಾನಾಂ ಪರಸ್ವಾದುಪರತಸ್ಯ ಸತ್ಯವಾದಿನಃ ಶಮಪರಸ್ಯ ಪರೀಕ್ಷ್ಯಕಾರಿಣೋ ಅಪ್ರಮತ್ತಸ್ಯ ತ್ರಿವರ್ಗಂ ಪರಸ್ಪರೇಣ ಅನುಪಹತಮುಪಸೇವಮಾನಸ್ಯ ಪೂಜಾರ್ಹ ಸಂಪೂಜಕಸ್ಯ ಜ್ಞಾನವಿಜ್ಞಾನೋಪಶಮಶೀಲಸ್ಯ ವೃದ್ಧೋಪಸೇವಿನಃ ಸುನಿಯತರಾಗರೋಷೇರ್ಷ್ಯಾಮದಮಾನವೇಗಸ್ಯ ಸತತಂ ವಿವಿಧಪ್ರದಾನಪರಸ್ಯ ತಪೋಜ್ಞಾನಪ್ರಶಮನಿತ್ಯಸ್ಯಾಧ್ಯಾತ್ಮವಿದಸ್ತತ್ಪರಸ್ಯ ಲೋಕಮಿಮಂ ಚಾಮುಂ ಚಾವೇಕ್ಷಮಾಣಸ್ಯ ಸ್ಮೃತಿಮತಿಮತೋ ಹಿತಮಾಯುರುಚ್ಯತೆ..” ಚ.ಸೂ.೩೦/೨೪

ಸದಾ ಸರ್ವ ಜೀವಿಗಳ ಹಿತವನ್ನೇ ಬಯಸುವವರು, ಪರರ ಧನವನ್ನು ಆಶಿಸದವರು, ಸತ್ಯವಾದಿಗಳು, ಶಾಂತಿಪ್ರಿಯರು, ವಿವೇಚನಾ ಪೂರ್ವಕವಾಗಿ ಧರ್ಮ, ಅರ್ಥ, ಕಾಮಗಳೆಂಬ ತ್ರಿವರ್ಗಗಳನ್ನು ಪರಸ್ಪರ ತೊಡಕಾಗದಂತೆ ಅನುಭವಿಸುವವರು, ಪೂಜಾರ್ಹರನ್ನು ಪೂಜಿಸುವವರು, ಜ್ಞಾನವಿಜ್ಞಾನಶೀಲರು, ವೃದ್ಧರ ಸೇವೆ ಮಾಡುವವರು, ರಾಗ, ರೋಷ, ಈರ್ಷ್ಯ, ಮದ ಮುಂತಾದ ವೇಗಗಳನ್ನು ಹತೋಟಿಯಲ್ಲಿಟ್ಟುಕೊಂಡಿರುವವರು, ಸತತ ದಾನಪರರು, ನಿತ್ಯ ತಪೋಜ್ಞಾನ, ಪ್ರಶಮ, ಆಧ್ಯಾತ್ಮಪರರು, ಇಹ ಹಾಗೂ ಪರಲೋಕಗಳಲ್ಲಿ ಹಿತವನ್ನೇ ಬಯಸುವವರು, ಸ್ಮೃತಿ ಹಾಗೂ ಮತಿಯುಳ್ಳವರು - ಹೀಗೆ ಯಾರು ಮೇಲೆ ತಿಳಿಸಿದಂತೆ ಜೀವನವನ್ನು ನಡೆಸುತ್ತಾರೋ, ಅಂಥಹವರ ಆಯು ಅಥವಾ ಜೀವಿತವು ‘ಹಿತಾಯು’ ಎಂದು ಕರೆಯಲ್ಪಡುತ್ತದೆ.

ಅಹಿತಾಯು :

ಅಹಿತಮತೋ ವಿಪರ್ಯಯೇಣ ||” .ಸೂ.೩೦/೨೪

ಮೇಲೆ ತಿಳಿಸಿದ್ದಕ್ಕೆ ವಿರುದ್ಧವಾಗಿ ಯಾರು ಜೀವನವನ್ನು ನಡೆಸುತ್ತಾರೋ, ಅಂಥಹವರ ಆಯು ಅಥವಾ ಜೀವಿತವು ‘ಅಹಿತಾಯು’ ಎಂದು ಕರೆಯಲ್ಪಡುತ್ತದೆ.

ಸುಖಾಯು :

ತತ್ರ ಶಾರೀರಮಾನಸಾಭ್ಯಾಂ ರೋಗಾಭ್ಯಾಂ ಅನಭಿದ್ರುತಸ್ಯ ವಿಶೇಷೇಣ ಯೌವನವತಃ ಸಮರ್ಥಾನುಗತ ಬಲವೀರ್ಯಯಶಃಪೌರುಷಪರಾಕ್ರಮಸ್ಯ ಜ್ಞಾನವಿಜ್ಞಾನ ಇಂದ್ರಿಯ ಇಂದ್ರಿಯಾರ್ಥಬಲಸಮುದಯೇ ವರ್ತಮಾನಸ್ಯ ಪರಮರ್ದ್ಧಿರುಚಿರವಿವಿಧೋಪಭೋಗಸ್ಯ ಸಮೃದ್ಧಸರ್ವಾರಂಭಸ್ಯ ಯಥೇಷ್ಟವಿಚಾರಿಣಃ ಸುಖಮಾಯುರುಚ್ಯತೆ ... ” .ಸೂ.೩೦/೨೪

ಶಾರೀರ ಹಾಗೂ ಮಾನಸಿಕ ರೋಗಗಳಿಂದ ಮುಕ್ತರು, ವಿಶೇಷವಾಗಿ ಯೌವನ ಉಳ್ಳವರು, ಸರ್ವ ಕಾರ್ಯಗಳನ್ನು ಮಾಡಲು ಸಮರ್ಥರು, ಬಲ, ವೀರ್ಯ, ಯಶಃ, ಪೌರುಷ, ಪರಾಕ್ರಮಗಳನ್ನು ಹೊಂದಿರುವವರು, ಜ್ಞಾನ, ವಿಜ್ಞಾನ, ಇಂದ್ರಿಯ ಹಾಗೂ ಇಂದ್ರಿಯಾರ್ಥಗಳ ಉಪಭೋಗದಲ್ಲಿ ಸಮರ್ಥರು, ಉತ್ತಮ ಸಂಪತ್ತು ಹೊಂದಿರುವವರು, ಆರಂಭಿಸಿದ ಕಾರ್ಯದಲ್ಲಿ ಸಿದ್ಧಿ ಪಡೆಯುವವರು, ಸ್ವತಂತ್ರರು - ಈ ರೀತಿಯಾಗಿ ಯಾರ ಜೀವಿತವು ಇರುವುದೋ, ಅಂಥಹವರ ಆಯು ಅಥವಾ ಜೀವಿತವು ‘ಸುಖಾಯು’ ಎಂದು ಕರೆಯಲ್ಪಡುತ್ತದೆ.

ದುಃಖಾಯು/ಅಸುಖಾಯು :

“ಅಸುಖಮತೋ ವಿಪರ್ಯಯೇಣ || ” ಚ.ಸೂ.೩೦/೨೪

ಮೇಲೆ ತಿಳಿಸಿದ್ದಕ್ಕೆ ವಿರುದ್ಧವಾಗಿ ಯಾರ ಜೀವಿತವು ಇರುವುದೋ, ಅಂಥಹವರ ಆಯು ಅಥವಾ ಜೀವಿತವು ‘ದುಃಖಾಯು’ ಎಂದು ಕರೆಯಲ್ಪಡುತ್ತದೆ.

ಆಯುವಿನ ಮಾನ ಅಥವಾ ಪ್ರಮಾಣ :
ಮಾನವನ ಸಾವು ಸಮೀಪಿಸಿದಾಗ ಅವನ ಇಂದ್ರಿಯ, ಇಂದ್ರಿಯಾರ್ಥ, ಮನ, ಬುದ್ಧಿ, ಕಾರ್ಯಗಳಲ್ಲಿ ಕೆಲವು ವಿಕೃತ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಅವನ್ನು ಆಯುರ್ವೇದದಲ್ಲಿ ‘ಅರಿಷ್ಟ ಲಕ್ಷಣಗಳು’ ಎಂದು ಕರೆಯುತ್ತಾರೆ. ಇವುಗಳ ಆಧಾರದ ಮೇಲೆ ಒಬ್ಬ ಇಷ್ಟೇ ಸಮಯ ಬದುಕುತ್ತಾನೆ ಎಂದು ನಿರ್ದಿಷ್ಟವಾಗಿ ಹೇಳಬಹುದು ಎಂದು ಆಯುರ್ವೇದ ಶಾಸ್ತ್ರ ಪ್ರತಿಪಾದಿಸುತ್ತದೆ. ಇವು ಮರಣದ ಒಂದು ವರ್ಷಕ್ಕೂ ಮುನ್ನ ಕಾಣಿಸಿಕೊಳ್ಳುವುದಿಲ್ಲ. ಒಬ್ಬನಲ್ಲಿ ವ್ಯಕ್ತವಾದ ಅರಿಷ್ಟ ಲಕ್ಷಣಗಳ ಆಧಾರದ ಮೇಲೆ ಅವನು ಒಂದು ಕ್ಷಣ, ಮುಹೂರ್ತ, ಒಂದು, ಮೂರು, ಐದು, ಏಳು, ಹತ್ತು ಅಥವಾ ಹನ್ನೆರಡು ದಿನ, ಪಕ್ಷ, ಮಾಸ, ಆರು ತಿಂಗಳು ಅಥವಾ ಒಂದು ವರ್ಷ ಬದುಕುತ್ತಾನೆ ಎಂದು ಹೇಳಬಹುದು. ಹೀಗೆ ಆಯುವಿನ ಪ್ರಮಾಣದ ಬಗ್ಗೆಯೂ ಆಯುರ್ವೇದದಲ್ಲಿ ತಿಳಿಸಲಾಗಿದೆ.
                                                                                                        [ಮುಂದುವರೆಯುವುದು]

No comments: